ಕೇಂದ್ರ ಗುಪ್ತಚರ ಮಾಹಿತಿ ಹಿನ್ನೆಲೆ: ಬೆಂಗಳೂರು ಸೇರಿ 4 ಮಹಾನಗರಗಳಲ್ಲಿ ಹೈ ಅಲರ್ಟ್
ಪ್ರಮುಖ ನಗರಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಯಬಹುದು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಬೆಂಗಳೂರು ಸೇರಿದಂತೆ ನಾಲ್ಕು ನಗರಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲು ಸೂಚಿಸಲಾಗಿದೆ.
ಬೆಂಗಳೂರು: ಕೇಂದ್ರ ಗುಪ್ತಚರ ದಳದ ಮಾಹಿತಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ನಾಲ್ಕು ಮಹಾನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರು, ರಾಷ್ಟ್ರ ರಾಜಧಾನಿ ಹೊಸದಿಲ್ಲಿ, ವಾಣಿಜ್ಯ ನಗರಿ ಮುಂಬಯಿ ಹಾಗೂ ಮುತ್ತಿನ ನಗರಿ ಹೈದರಾಬಾದ್ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಗುಪ್ತಚ ಇಲಾಖೆ ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲು ಪೊಲೀಸ್ ಆಯುಕ್ತರು ಸ್ಪಷ್ಟ ಆದೇಶ ಹೊರಡಿಸಿದ್ದಾರೆ.
ನಗರದ ಪ್ರಮುಖ ತಾಣಗಳಾದ ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ಮೆಟ್ರೋ, ಬಸ್ನಿಲ್ದಾಣ, ಬೆಂಗಳೂರಿನ ಎಲ್ಲಾ ರೈಲು ನಿಲ್ದಾಣಗಳು, ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳು, ಜನನಿಬಿಡ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಹಾಸ್ಟೆಲ್, ಅಪಾರ್ಟ್ಮೆಂಟ್, ಧಾರ್ಮಿಕ ಮಂದಿರಗಳು, ಪಂಚತಾರಾ ಹೋಟೆಲ್, ಉನ್ನತ ಶಿಕ್ಷಣ ಸಂಸ್ಥೆ, ಮಾಲ್ಗಳಲ್ಲಿ ಬಿಗಿ ಭದ್ರತೆಗೆ ಆದೇಶಿಸಲಾಗಿದೆ.
ಆಯಕಟ್ಟಿನ ಸ್ಥಳಗಳಲ್ಲಿ ಕಟ್ಟೆಚ್ಚರದಿಂದಿರುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ಅನುಮಾನಾಸ್ಪದ ವ್ಯಕ್ತಿ, ವಸ್ತು, ವಾಹನಗಳ ತಪಾಸಣೆ ಮಾಡುವಂತೆ ತಿಳಿಸಲಾಗಿದೆ.
ಪ್ರಮುಖ ಸ್ಥಳಗಳಲ್ಲಿ ಚೆಕ್ಪೋಸ್ಟ್ ನಿರ್ಮಿಸಿ ಕಟ್ಟೆಚ್ಚರ ವಹಿಸಬೇಕು, ಎಲ್ಲಾ ಪೊಲೀಸ್ ಅಧಿಕಾರಿಗಳು, ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತಂಡ ಸನ್ನದ್ಧರಾಗಿರಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಸೂಚನೆ ಹೊರಡಿಸಿದ್ದಾರೆ.