ಹೇಗಿದ್ರು, ಹೇಗಾದ್ರು ಗೊತ್ತಾ ಮುತ್ತಪ್ಪ ರೈ..!
Report By News Toniq | Bengaluru | Last Updated at May 14 2020
ಮುತ್ತಪ್ಪ ರೈ ಈ ಹೆಸರು ಕೇಳದವರೇ ಇಲ್ಲ. ಮುತ್ತಪ್ಪ ರೈ ಅವರದ್ದು ಕಲರ್ ಫುಲ್ ಲೈಫ್. ಇಂತಹದ್ದೊಂದು ಲೈಫ್ ಅಷ್ಟು ಸುಲಭಕ್ಕೆ ಯಾರಿಗೂ ದಕ್ಕೋದಿಲ್ಲ. ರೈ ಮಾಜಿ ಡಾನ್. ಭೂಗತ ಲೋಕವನ್ನ ಖಡಕ್ ಆಗಿ ಮೆಂಟೇನ್ ಮಾಡಿದ್ದ ಆಸಾಮಿ. ಜಗತ್ತಿನ ಭೂಗತ ಲೋಕದಲ್ಲಿ ಇಷ್ಟೊಂದು ಸ್ಮಾರ್ಟ್ ಆಗಿದ್ದ ವ್ಯಕ್ತಿ ಇನ್ಯಾರು ಇರಲಿಲ್ಲ ಅಂತ ಅನ್ಸುತ್ತೆ.
ಜೈಲಿನಿಂದ ಹೊರಗೆ ಬಂದ ಮೇಲೆ ಅವರು ಇನ್ನಷ್ಟು ಸ್ಪುರದ್ರೂಪಿಯಾಗಿದ್ರು. ಬೆಳ್ಳಗಿನ ಕುರುಚಲು ಗಡ್ಡ, ಮುಖದ ಅಂದವನ್ನ ಹೆಚ್ಚಿಸೋ ಕಲರ್ ಫುಲ್ ಶೇಡ್..ಜೊತೆಗೆ ಕಪ್ಪು ಬಟ್ಟೆ ಧರಿಸಿ ಹಿಂಬಾಲಿಸಿಕೊಂಡು ಬರ್ತಿದ್ದ ಗನ್ ಮ್ಯಾನ್ ಪಡೆ ಇದನ್ನ ನೋಡ್ತಿದ್ರೆ ಕೋಟಿಗೊಬ್ಬ ಸಿನಿಮಾದ ಜಯಸಿಂಹನ ನೆನಪಾಗ್ತಿತ್ತು. ಆಳೆತ್ತರದ ಅಜಾನುಬಾಹು ಶರೀರ…ಸುಂದರ ವ್ಯಕ್ತಿತ್ವ ಅವರನ್ನ ಗೌರವದಿಂದ ನೋಡುವಂತೆ ಮಾಡಿತ್ತು. ಮುತ್ತಪ್ಪ ರೈ ಅಂದಾಕ್ಷಣ ಇದೇ ದೃಶ್ಯ ಕಣ್ಣಮುಂದೆ ಬರ್ತಿತ್ತು. ಭೂಗತ ಲೋಕದಿಂದ ಬಂದ್ರು ಕೂಡಾ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಅಭಿಮಾನಿಗಳನ್ನ ಸಂಪಾದಿಸಿದ್ರು. ಆದ್ರೆ ಸಮಯ ಸನ್ನಿವೇಶ ಎಲ್ಲವು ಒಂದೇ ರೀತಿ ಇರೋದಿಲ್ಲ. ಕಣ್ಣು ಕೋರೈಸುತ್ತಿದ್ದ ಮುತ್ತಪ್ಪ ರೈ ಅವರ ಸೌಂದರ್ಯ ಈಗ ಕುಗ್ಗಿ ಹೋಗಿದೆ. ಅದ್ಯಾರ ಕಣ್ಣುಬಿತ್ತೋ ಏನೋ ಹೀರೋ ಅಂತಿದ್ದ ರೈ ಸೊರಗಿ ಹೋಗಿದ್ದಾರೆ. ಕ್ಯಾನ್ಸರ್ ರೋಗ ಅವರನ್ನ ಹಿಂಡಿ ಹಿಪ್ಪೆ ಮಾಡಿ ಹಾಕಿದೆ. ಐಷರಾಮಿ ಜೀವನ ನಡೆಸಿ ತೇಲುತ್ತಿದ್ದ ರೈ ಅವರಿಗೆ ಈಗ ಕ್ಯಾನ್ಸರ್ ಇನ್ನಿಲ್ಲದಂತೆ ಕಾಡ್ತಿದೆ. ಜೀವನದ ಉತ್ಸುವನ್ನ ರೋಗ ಬಸಿದು ಹಾಕಿದೆ. ಮನುಷ್ಯನಿಗೆ ಸಾವು ಹತ್ತಿರವಾಗ್ತಿದ್ದ ಹಾಗೆ ಏನೆಲ್ಲಾ ಅನಿಸುತ್ತೆ ಅನ್ನೋದಕ್ಕೆ ಮುತ್ತಪ್ಪ ರೈ ಅವರೇ ದೊಡ್ಡ ಉದಾಹರಣೆ.
ಅವರೇ ಹೇಳಿಕೊಳ್ಳುವಂತೆ ಸುಮಾರು 50ಸಾವಿರ ಕೋಟಿ ರೂಪಾಯಿಗೆ ಒಡೆಯರಾಗಿದ್ರು ಮುತ್ತಪ್ಪ ರೈ. ಆದ್ರೆ ಅದ್ಯಾವ ದುಡ್ಡು ಕೂಡಾ ತನ್ನ ಸಾವನ್ನ ಮುಂದೂಡೋದಿಲ್ಲ ಅನ್ನೋದು ಅವರಿಗೆ ಗೊತ್ತಾಗಿದೆ. ಎಷ್ಟೇ ದುಡ್ಡಿದ್ರು ಜಗತ್ತಿನ ಯಾವ ಆಸ್ಪತ್ರೆಯು , ಯಾವ ಡಾಕ್ಟರ್ ಕೂಡಾ ಸಾಯೋ ದಿನವನ್ನ ಮುಂದಕ್ಕೆ ಹಾಕೋದಕ್ಕೆ ಸಾಧ್ಯವಿಲ್ಲ ಅನ್ನೋ ಸತ್ಯದರ್ಶನವಾಗಿದೆ. ಇತ್ತೀಚೆಗೆ ರೈ ಅವರ ಸ್ಥಿತಿ ಗಂಭೀರ ಅನ್ನೋ ಸುದ್ದಿ ಹರಿದಾಡಿತ್ತು. ಬಳಿಕ ಅವರ ಆಪ್ತರು ಮುತ್ತಪ್ಪ ರೈ ಅವ್ರು ಆರೋಗ್ಯವಾಗಿದ್ದಾರೆ ಅಂತ ಫೋಟೋವನ್ನ ಶೇರ್ ಮಾಡಿದ್ರು. ಆ ಫೋಟೋಗಳನ್ನ ನೋಡಿದ್ರೆ ಹಿಂದಿನ ಮುತ್ತಪ್ಪ ರೈ ಗೂ ಇವತ್ತಿನ ಅವರ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಇರೋದು ಗೊತ್ತಾಗುತ್ತೆ. ಈಗ ಅದೇ ಮುತ್ತಪ್ಪ ರೈ ಸಾವಿನ ವಂದತಿ ಹಬ್ಬಿದೆ.ಈ ಬಾರಿ ಮುತ್ತಪ್ಪ ರೈ ಆರೋಗ್ಯ ಗಂಭೀರವಾಗಿದೆ ಅಂತ ವರದಿಗಳು ಬರುತ್ತಿವೆ.
