ವಲಸೆ ಕಾರ್ಮಿಕರ ಮಕ್ಕಳಿಗೆ ಪ್ರಗತಿ ಸೇವಾ ಟ್ರಸ್ಟ್‌ನಿಂದ ಹಾಲು ವಿತರಣೆ
Report By Bora Nayak | Mandya District | Last Updated at April 18 2020
ಮಂಡ್ಯ ಜಿಲ್ಲೆಪಾಂಡವಪುರ: ಎಲೆಕೆರೆ ಗ್ರಾಮದಲ್ಲಿ ಬೀಡು ಬಿಟ್ಟಿರುವ 100ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಮಕ್ಕಳಿಗೆ ಇಲ್ಲಿನ ಪ್ರಗತಿ ಸೇವಾ ಟ್ರಸ್ಟ್‌ನಿಂದ ಉಚಿತವಾಗಿ ಹಾಲು ವಿತರಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ರಾಗೀಮುದ್ದನಹಳ್ಳಿ ಡಾ. ನಾಗೇಶ್ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರ ಜೀವನ ನಿರ್ವಹಣೆ ಕಷ್ಟವಾಗಿದೆ. ಕೂಲಿ ಕೆಲಸವನ್ನೆ ನಂಬಿ ದೂರದ ತಮಿಳುನಾಡಿನಿಂದ ನೂರಾರು ಜನ ವಲಸೆ ಬಂದಿದ್ದಾರೆ.
ಆದರೆ, ಇಲ್ಲಿ ಕೃಷಿ ಚಟುವಟಿಕೆಗಳು sಸ್ಥಗಿತಗೊಂಡಿರುವ ಕಾರಣ ಜನರಿಗೆ ಕೂಲಿ ಕೆಲಸ ಸಿಗುತ್ತಿಲ್ಲ.
ಬಹುತೇಕ ಕುಟುಂಬಗಳಲ್ಲಿ ಪಡಿತರ ಚೀಟಿಯೂ ಇಲ್ಲದ ಕಾರಣ ಇವರ ಜೀವನ ನಿರ್ವಹಣೆ ಕಷ್ಟವಾಗಿದೆ.
100ಕುಟುಂಬಗಳಲ್ಲಿ ವೃದ್ಧರು, ಮಕ್ಕಳು ಪೌಷ್ಠಿಕಾಂಶದ ಕೊರತೆಯಿಂದ ನರಳುತ್ತಿದ್ದು, ಇದನ್ನು ನೀಗಿಸಲು ಪ್ರಗತಿ ಸೇವಾ ಟ್ರಸ್ಟ್‌ನಿಂದ ಮಕ್ಕಳು ಮತ್ತು ವೃದ್ಧರಿಗೆ ಹಾಲು ವಿತರಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿರುವ ಇಲ್ಲಿನ ಪ್ರತಿ ಮನೆಯ ಮಕ್ಕಳು ಮತ್ತು ವೃದ್ಧರಿಗೆ ಹಾಲು ವಿತರಿಸಲಾಯಿತು.
ಡಾ. ನಾಗೇಶ್, ರಾಗೀಮುದ್ದನಹಳ್ಳಿ ಆದಿತ್ಯ, ಎಂ.ಎಚ್. ವಿಜಯಕುಮಾರ್, ಚಿಟ್ಟನಹಳ್ಳಿ ಮಂಜು ಮುಂತಾದವರು ಭಾಗವಹಿಸಿದ್ದರು.