ಪಾಕ್ ಕ್ಯಾಪ್ಟನ್ ಆಗಲು ಇಮ್ರಾನ್ ಖಾನ್‌ಗೆ ಬೇಕು ಸಣ್ಣಪಕ್ಷಗಳ ಬೆಂಬಲ
ಇಸ್ಲಾಮಾಬಾದ್: 342 ಸದಸ್ಯಬಲದ ಪಾಕ್ ಸಂಸತ್‌ನಲ್ಲಿ ಪ್ರಸ್ತುತ 114 ಸ್ಥಾನ ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಸರಕಾರ ರಚಿಸಿ, ಇಮ್ರಾನ್ ಖಾನ್ ಪಾಕ್ ಪ್ರಧಾನಿಯಾಗಬೇಕಾದರೆ ಸಣ್ಣ ಪಕ್ಷ ಮತ್ತು ಪಕ್ಷೇತರರ ಬೆಂಬಲ ಪಡೆಯಬೇಕಾಗುತ್ತದೆ.
270 ಸ್ಥಾನಗಳ ಪೈಕಿ ಇಮ್ರಾನ್ ಖಾನ್ ಪಕ್ಷ 114 ಸ್ಥಾನ ಪಡೆದುಕೊಂಡಿದೆ. ಆದರೆ ಸರಕಾರ ರಚನೆಗೆ ಸರಳ ಬಹುಮತ ಪಡೆಯಲು 173 ಸ್ಥಾನ ಬೇಕಾಗಿದೆ. ಹೀಗಾಗಿ ಇಮ್ರಾನ್ ಖಾನ್ 29 ಮಹಿಳಾ ಮೀಸಲಾತಿ ಸ್ಥಾನಗಳ ಬೆಂಬಲ ಮತ್ತು 4 ಅಥವಾ 5 ಅಲ್ಪಸಂಖ್ಯಾತ ಮೀಸಲಾತಿ ಸ್ಥಾನ ಹಾಗೂ ಬಲೂಚ್ ಪ್ರಾಂತ್ಯದ ಪಕ್ಷೇತರರ ಬೆಂಬಲ ಪಡೆದರೆ ಸುಮಾರು 160 ಸ್ಥಾನ ಪಡೆಯಬಹುದು.
ಆದರೆ ಮತ್ತೆ ಸರಳ ಬಹುಮತ ಪಡೆಯಲು ಇತರ ಸಣ್ಣ ಪಕ್ಷಗಳ ಬೆಂಬಲ ಅಗತ್ಯವಾಗಿ ಬೇಕಾಗುತ್ತದೆ. ಇಮ್ರಾನ್ ನೇತೃತ್ವದ ಪಕ್ಷ ಬಹುಮತ ಪಡೆಯದಿದ್ದರೂ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ ಸರಕಾರ ರಚನೆಗೆ ಇತರರು ಬೆಂಬಲ ನೀಡುವ ಸಾಧ್ಯತೆಯಿದೆ.
ಹೀಗಾಗಿ ಚುನಾವಣೆ ನಡೆದು ಫಲಿತಾಂಶ ಘೋಷಣೆಯಾಗುತ್ತಲೇ ಸರಕಾರ ರಚನೆ ಕಸರತ್ತು ಸೃಷ್ಟಿಯಾಗಿದೆ. ಅಗತ್ಯ ಬೆಂಬಲ ಪಡೆಯುತ್ತಲೇ ಇಮ್ರಾನ್ ಖಾನ್ ಪ್ರಧಾನಿಯಾಗುವುದು ಖಚಿತವಾಗಿದೆ. ಉಳಿದಂತೆ ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ್ ಮುಸ್ಲಿಂ ಲೀಗ್ 62 ಸ್ಥಾನ ಪಡೆದಿದ್ದರೆ, ಆಸಿಫ್ ಅಲಿ ಜರ್ದಾರಿಯ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ 43 ಸ್ಥಾನ ಗಳಿಸಿದೆ.