ನೂತನ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ ಅವರು ಕೆ.ಆರ್.ಪೇಟೆ ಪಟ್ಟಣದ ಮಿನಿವಿಧಾನ ಸೌಧದ ಆವರಣದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದರು
Report By Bora Nayak | Mandya District | Last Updated at April 12 2020
ನಮ್ಮ ತಾಲ್ಲೂಕಿನ ರೋಗಿಗಳು ಮೈಸೂರು, ಬೆಂಗಳೂರು ಮತ್ತಿತರ ಕಡೆಗಳಲ್ಲಿರುವ ದೊಡ್ಡ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಹೋಗಲು ಜಿಲ್ಲಾಧಿಕಾರಿಗಳ ಕಚೇರಿಯಿಂದ
ಅಗತ್ಯ ಪಾಸ್ ದೊರೆಯದ ಕಾರಣ ರೋಗಿಗಳಿಗೆ ತೀವ್ರ ತೊಂದರೆಯಾಗಿದೆ. ಹಾಗಾಗಿ ತಾಲ್ಲೂಕು ಮಟ್ಟದಲ್ಲಿಯೇ ಆಸ್ಪತ್ರೆಗೆ ಹೋಗಲು ಪಾಸ್ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್ ಅವರು ಸಚಿವರ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಸಚಿವ ನಾರಾಯಣಗೌಡ ಅವರು ಈ ಬಗ್ಗೆ ಮುಖ್ಯಮಂತ್ರಿಗಳು ಹಾಗು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ತಾಲ್ಲೂಕು ಮಟ್ಟದಲ್ಲಿ ತಹಸೀಲ್ದಾರ್, ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳ ಜಂಟಿ ಶಿಫಾರಸ್ಸಿನ ಮೇರೆಗೆ ನಿಜವಾದ ರೋಗಿಗಳಿಗೆ ಇಲ್ಲಿಯೇ ಅಗತ್ಯ ಪಾಸ್ ನೀಡಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಪೆಟ್ರೋಲ್ ಕಾಳಸಂತೆಯಲ್ಲಿ ಲೀಟರ್ ಗೆ 150ರೂ ನಂತೆ ಮಾರಾಟ ನಡೆಯುತ್ತಿದೆ ಎಂಬ ದೂರಿದೆ ಇದಕ್ಕೆ ಪೊಲೀಸರು ಕಠಿಣ ಕ್ರಮ ಕೈಗೊಂಡು ಕಡಿವಾಣ ಹಾಕಬೇಕು. ಲಾಕ್ ಡೌನ್ ಹಿನ್ನೆಲೆಯ ನೆಪವಿಟ್ಟುಕೊಂಡು ಕೃತಕ ಅಭಾವ ಸೃಷ್ಠಿಸಿ ತರಕಾರಿ, ದಿನಬಳಕೆ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಿದರೆ ಅಂತಹ ಅಂಗಡಿಗಳನ್ನು ಬಂದ್ ಮಾಡಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಕೊರೊನೊ ಸೋಂಕು ಹರಡದಂತೆ ಸಾಮಾಜಿಕ ಅಂತರ ಕಾಪಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಹೊರರಾಜ್ಯ ಹಾಗೂ ಹೊರದೇಶಗಳಿಗೆ ಹೋಗಿ ಬಂದವರು ಸ್ವಯಂ ಪ್ರೇರಿತರಾಗಿ ಅಗತ್ಯ ಪರೀಕ್ಷೆಗೆ ಒಳಗಾಗಿ ಹೋಂ ಕ್ವಾರಂಟೈನ್ ನಿಯಮ ಪಾಲಿಸಬೇಕು. ಎಲ್ಲಾ ಮೆಡಿಕಲ್ ಅಂಗಡಿಗಳು ಕಡ್ಡಾಯವಾಗಿ ಮಾಸ್ಕುಗಳು ಹಾಗೂ ಸ್ಯಾನಿಟೈಸರ್ ಗಳನ್ನು ದಾಸ್ತಾನಿಡಬೇಕು. ನಿಗಧಿತ ಬೆಲೆಗೆ ಮಾರಾಟ ಮಾಡಬೇಕು. ಸಾರ್ವಜನಿಕರಿಗೆ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಲು ನಮ್ಮ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ವತಿಯಿಂದ ಐದು ನಿಮಿಷದಲ್ಲಿ ಗ್ರೀನ್ ಪಾಸ್ ನೀಡಲಾಗುವುದು. ಆರ್.ಟಿ.ಸಿ, ಆಧಾರ್ ಕಾರ್ಡ್ ಜೆರಾಕ್ಸ್ ನೀಡಿ ಪಡೆದುಕೊಳ್ಳಬಹುದು. ತಳ್ಳುವ ಗಾಡಿಯಲ್ಲಿ ಬಡಾವಣೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಹಣ್ಣು, ತರಕಾರಿ ಮಾರಲು ಮುಕ್ತ ಅವಕಾಶ ಇದೆ. ಒಂದು ಕಡೆ ನಿಲ್ಲುವಂತಿಲ್ಲ. ಬಡವರಿಗೆ ಊಟ ನೀಡಲು ಇಚ್ಚಿಸುವವರು ತಹಸೀಲ್ದಾರ್ ಅವರಿಂದ ಅಗತ್ಯ ಅನುಮತಿ ಪಡೆದುಕೊಂಡು ಬಡವರಿಗೆ ಊಟ ಅಥವಾ ದಿನಸಿ ಪದಾರ್ಥಗಳನ್ನು ನೇರವಾಗಿ ನೀಡಬಹುದಾಗಿದೆ ಎಂದು ಸಚಿವ ನಾರಾಯಣಗೌಡ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ವಿಪ್ರೋ ಸಂಸ್ಥೆಯ ವತಿಯಿಂದ ಸುಮಾರು 250ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ಗಳನ್ನು ಸಚಿವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಂಡ್ಯ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ತಹಸೀಲ್ದಾರ್ ಎಂ.ಶಿವಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಚ್.ಟಿ.ಹರೀಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್.ಚಂದ್ರಮೌಳಿ, ಸರ್ಕಲ್ ಇನ್ಸ್ ಪೆಕ್ಟರ್ ಸುಧಾಕರ್, ಸಮಾಜ ಕಲ್ಯಾಣಾಧಿಕಾರಿ ಡಾ.ಮನುಕುಮಾರ್, ಜಿ.ಪಂ.ಮಾಜಿ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಡಾ.ಲೋಕೇಶ್, ಎಸ್.ಅಂಬರೀಶ್, ಜಿ.ಪಂ.ಮಾಜಿ ಸದಸ್ಯ ಅಘಲಯ ಮಂಜುನಾಥ್, ಬಿ.ಸಿ.ಎಂ.ಅಧಿಕಾರಿ ವೆಂಕಟೇಶ್, ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಗ್ರಾಮಾಂತರ ಠಾಣೆಯ ಪಿ.ಎಸ್.ಐ ಲಕ್ಷ್ಮಣ್, ಪುರಸಭೆಯ ಸದಸ್ಯರುಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.