ನೀವು ಮೋಸ ಹೋಗ್ಬಾರ್ದು ಅಂದ್ರೆ ಕನ್ನಡದಲ್ಲಿ ಮಾತಾಡಿ..!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಎಷ್ಟು ಫಾಸ್ಟ್ ಆಗಿ ಬೆಳೆಯುತ್ತಿದೆಯೋ ಅಷ್ಟೇ ವೇಗವಾಗಿ ಕ್ರೈಂ ರೇಟ್ ಕೂಡ ಹೆಚ್ಚುತ್ತಿದೆ. ಅದ್ರಲ್ಲೂ ಇತ್ತೀಚೆಗೆ ಸೈಬರ್ ಕ್ರೈಂ ಅನ್ನೋದು ಇಡೀ ಬೆಂಗಳೂರಿಗರನ್ನ ಬೆಚ್ಚಿಬೀಳಿಸಿದೆ. ಪ್ರತಿ ನಿತ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಹತ್ತಾರು ಕೇಸ್ಗಳು ದಾಖಲಾಗುತ್ತಿವೆ.
ಅದರಲ್ಲಿ ಪ್ರಮುಖವಾಗಿ ಕಾಲ್ ಮಾಡಿ ಕಾರ್ಡ್ ನಂಬರ್ (ಕ್ರೆಡಿಟ್ ಅಂಡ್ ಡೆಬಿಟ್), ಸಿವಿ ನಂಬರ್, ಓಟಿಪಿ ನಂಬರ್ ಕೇಳಿ ಮೋಸ ಮಾಡೋ ಪ್ರಕರಣಗಳು ಜಾಸ್ತಿಯಾಗಿವೆ. ಕಳೆದ 7 ತಿಂಗಳಲ್ಲಿ 2530ಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದು, ಅದರಲ್ಲಿ ಶೇಕಡಾ 50% ರಷ್ಟು ಈ ರೀತಿಯಾಗಿ ಮೋಸ ಹೋಗಿರುವವರೇ ಜಾಸ್ತಿ ಅನ್ನೋದೇ ವಿಪರ್ಯಾಸ.
ಉತ್ತರ ಭಾರತದವರಿಂದ ಮೋಸ..!?
ಪ್ರಕರಣದ ತನಿಖೆ ಮಾಡುತ್ತಿರುವ ಸೈಬರ್ ಕ್ರೈಂ ಪೊಲೀಸರಿಗೆ ಅಚ್ಚರಿಯೊಂದು ಎದುರಾಗಿದೆ. ಮೋಸ ಮಾಡಿದವರೆಲ್ಲಾ ಬರೀ ಹಿಂದಿಯಲ್ಲಿ ಕರೆ ಮಾಡಿ ವಂಚಿಸಿದ್ದಾರೆ. ಹೆಚ್ಚಾಗಿ ಜಾರ್ಖಂಡ್, ಉತ್ತರಪ್ರದೇಶ ರಾಜ್ಯಗಳಿಂದ ಕರೆ ಮಾಡಿದ್ದಾರೆ. ಕರೆಗೆ ಬಳಸಿರುವಂತಹ ಎಲ್ಲಾ ನಂಬರ್ಗಳು ಮುಂಬೈ ಅಡ್ರೆಸ್ ಪ್ರೂಫ್ ನಂಬರ್ಗಳಾಗಿವೆ. ಇದರಿಂದ ವಂಚಕರನ್ನ ಬಂಧಿಸೋದು ಅಷ್ಟು ಸುಲಭವಲ್ಲ ಅನ್ನೋದು ಸೈಬರ್ ಕ್ರೈಂ ಪೊಲೀಸರ ಮಾತಾಗಿದೆ.
ಜಾಗೃತಿ ಒಂದೇ ಪರಿಹಾರ..!
ಸೈಬರ್ ಕ್ರೈಂ ಪೊಲೀಸರ ಪ್ರಕಾರ, ಆರೋಪಿಗಳ ಪತ್ತೆ ಮಾಡಿದರೂ ಅದಕ್ಕೆ ಬೇಕಾದ ಸಾಕ್ಷಿಗಳನ್ನ ಒದಗಿಸುವುದು ಚಾಲೆಂಜಿಗ್ ಆಗಿದೆ. ಕಾರಣ ಆರೋಪಿಗಳು ಅಕೌಂಟ್ಗಳ ಹ್ಯಾಕ್ ಮಾಡೋದಕ್ಕೆ ವೈ-ಫೈ ಕೂಡ ಹ್ಯಾಕ್ ಮಾಡಿ ಬಳಸುತ್ತಿದ್ದಾರೆ. ಇದರಿಂದ ಐಪಿ ಅಡ್ರೆಸ್ ಟ್ರ್ಯಾಕ್ ಮಾಡೋದು ಅಸಾಧ್ಯವಾಗಿದೆ. ಅಲ್ಲದೇ ಸೈಬರ್ ಕ್ರೈಂ ವಂಚಕರು ನಗರದ ಆಚೆ ಇದ್ದುಕೊಂಡು ಕೃತ್ಯ ಎಸಗುತ್ತಿದ್ದಾರೆ ಅನ್ನೋದು ಪೊಲೀಸರಿಗೆ ತಲೆನೋವಾಗಿದೆ. ಇಲ್ಲಿ ತನಕ ರಾಜ್ಯದಲ್ಲಿದ್ದುಕೊಂಡು ವಂಚಿಸಿದವರನ್ನ ಮಾತ್ರ ಸೆರೆಹಿಡಿಯಲಾಗಿದ್ದು, ಹೊರ ರಾಜ್ಯದ (ಉತ್ತರಭಾರತದ) ವಂಚಕರ ಬಂಧನ ತೀರ ವಿರಳ ಆಗಿರೋದೇ ಇದಕ್ಕೆ ಸಾಕ್ಷಿ.
ಹಳ್ಳಿ ಜನರೇ ಬುದ್ಧಿವಂತರು..!
ಕರ್ನಾಟಕ ಸ್ಟೇಟ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಮಾಹಿತಿ ಪ್ರಕಾರ ಈ ರೀತಿ ವಂಚನೆ ಆದವರಲ್ಲಿ ಸಿಟಿಯವರೇ ಅತಿ ಹೆಚ್ಚಾಗಿದ್ದಾರೆ. ಹಳ್ಳಿಗರು, ಇಂತಹ ಕರೆಗಳಿಗೆ ಕ್ಯಾರೆ ಅನ್ನದೇ ಸೇಫ್ ಆಗಿದ್ದಾರೆ. ಒಂದೆಡೆ ಭಾಷಾ ತೊಂದರೆಯಾದ್ರೆ ಮತ್ತೊಂದೆಡೆ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ಗಳನ್ನ ಹಳ್ಳಿಗರು ಮಿತವಾಗಿ ಬಳಸುತ್ತಾರೆ. ಇದರಿಂದ ವಹಿವಾಟು ಕಡಿಮೆಯಾದ ಹಿನ್ನೆಲೆಯಲ್ಲಿ ಹಳ್ಳಿಗರು ವಂಚನೆ ಪ್ರಮಾಣದಲ್ಲಿ ಶೇಕಡ 10 ರಷ್ಟು ಮಾತ್ರ ಇದ್ದಾರೆ. ಇಲ್ಲಿತನಕ ವಂಚನೆ ಗೋಳಗಾದವರಲ್ಲಿ ಶೇ. 90ರಷ್ಟು ಮಂದಿ ಸಿಟಿಯವರೇ ಆಗಿದ್ದಾರೆ.
ಕನ್ನಡ ಮಾತನಾಡಿದ್ರೆ ಮೋಸ ಹೋಗಲ್ಲ!
ಸೈಬರ್ ಕ್ರೈಂ ಪೊಲೀಸರ ತನಿಖೆಯಲ್ಲಿ ಇನ್ನೊಂದು ಮಹತ್ವದ ಅಂಶ ಬಹಿರಂಗವಾಗಿದೆ. ಯಾರೆಲ್ಲಾ ಕನ್ನಡ ಮಾತನಾಡುತ್ತಾರೋ ಅವರು ಮೋಸ ಹೋಗಲ್ಲ ಅನ್ನೋದು ಬೆಳಕಿಗೆ ಬಂದಿದೆ. ಬಹುತೇಕ ವಂಚಕರು ಹಿಂದಿಯಲ್ಲೇ ಕರೆ ಮಾಡಿ ಬ್ಯಾಂಕ್ ವಿವರಗಳನ್ನ ಕೇಳ್ತಾರೆ. ಯಾರು ಮೊದಲು ಕನ್ನಡ ಭಾಷೆಯಲ್ಲಿ
ಮಾತಾನಾಡುತ್ತಾರೋ ವಂಚಕರು ಅವರ ಕಾಲ್ಗಳನ್ನ ಡಿಸ್ ಕನೆಕ್ಟ್ ಮಾಡುತ್ತಿದ್ದಾರೆ. ಸೈಬರ್ ಕ್ರೈಂ ಪೊಲೀಸರ ಪ್ರಕಾರ ಇಂತಹ ಕರೆಗಳಲ್ಲಿ ಕನ್ನಡ ಭಾಷೆಯಲ್ಲಿ ಉತ್ತರಿಸಿದ ಶೇ.97 ರಷ್ಟು ಮಂದಿ ವಂಚನೆಯಿಂದ ಬಚಾವ್ ಆಗಿದ್ದಾರೆ. ಅಲ್ಪ ಸ್ವಲ್ಪ ಹಿಂದಿ ಬರುವವರು ಮಾತನಾಡಿ ಶೇಕಡಾ 3 ರಷ್ಟು ವಂಚನೆಗೆ ಒಳಗಾಗಿದ್ದಾರೆ. ಹೀಗಾಗಿ ನೀವು ಕನ್ನಡ ಮಾತಾಡಿ ವಂಚಕರಿಂದ ಬಚಾವ್ ಆಗಿ.