ನಾಳೆ ಕೋರ್ಟ್ ಮೆಟ್ಟಿಲೇರಲಿದ್ದಾರೆ ಡಿಕೆಶಿ..!
ಬೆಂಗಳೂರು: ಹವಾಲಾ ವ್ಯವಹಾರದಲ್ಲಿ ಭಾಗಿಯಾಗಿ ಹೈಕಮಾಂಡ್ಗೆ ಕಪ್ಪ ನೀಡಿರುವ ಮತ್ತು ತೆರಿಗೆ ವಂಚನೆಯ ಆರೋಪ ಎದುರಿಸುತ್ತಿರುವ ಸಚಿವ ಡಿ.ಕೆ.ಶಿವಕುಮಾರ್ ನಾಳೆ ಕೋರ್ಟ್ಗೆ ಹಾಜರಾಗಲಿದ್ದಾರೆ.
ಆದಾಯ ತೆರಿಗೆ ಇಲಾಖೆ ನೀಡಿದ್ದ ದೂರಿನ ಅನ್ವಯ ಆರ್ಥಿಕ ವಿಶೇಷ ನ್ಯಾಯಾಲಯ ಡಿಕೆ ಶಿವಕುಮಾರ್ ಗೆ ಸಮನ್ಸ್ ಜಾರಿ ಮಾಡಿತ್ತು. ಡಿಕೆಶಿ ಜೊತೆಗೆ ಸಚಿನ್ ನಾರಾಯಣ್, ಸುನಿಲ್ ಶರ್ಮಾ, ರಾಜೇಂದ್ರ ಹಾಗೂ ಆಂಜನೇಯ ಎಂಬುವವರಿಗೂ ಕೋರ್ಟ್ ಸಮನ್ಸ್ ನೀಡಿದ್ದು, ನಾಳೆ ಎಲ್ರೂ ಕೋರ್ಟ್ಗೆ ಖುದ್ದು ಹಾಜರಾಗಬೇಕಿದೆ.
ಬಂಧನ ಭೀತಿ ಎದುರಿಸುತ್ತಿರುವ ಆರೋಪಿಗಳು ಜಾಮೀನು ಕೋರಿ ನಾಳೆಯೇ ಅರ್ಜಿ ಸಲ್ಲಿಸಿ, ವಾದ ಮಂಡಿಸುವ ಸಾಧ್ಯತೆ ಕೂಡಾ ಇದೆ. ಐಟಿ ಇಲಾಖೆ ದಾಖಲಿಸಿದ್ದ ದೂರಿಗೆ ಅಕ್ಷೇಪಣೆ ಸಲ್ಲಿಸಿ ತನ್ನನ್ನ ಆರೋಪದಿಂದ ಕೈಬಿಡುವಂತೆಯೂ ಕೇಳಬಹುದು. ಈ ಹಿಂದೆ ಸಚಿನ್ ನಾರಾಯಣ್ ಕೋರ್ಟ್ ಮೆಟ್ಟಿಲೇರಿದ್ದು, ತನ್ನ ವಿರುದ್ಧದ ತನಿಖೆಗೆ ತಾತ್ಕಾಲಿಕ ತಡೆ ಪಡೆದಿದ್ದಾರೆ. ಹೀಗಾಗಿ ಸಚಿನ್ ನಾರಾಯಣ್ಗೆ ಹಾಜರಾತಿಯಿಂದ ವಿನಾಯಿತಿ ಸಿಗಲಿದೆ ಅಂತಾ ತಿಳಿದು ಬಂದಿದೆ.
ಕಳೆದ ವರ್ಷ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದ ಡಿಕೆಶಿ ಮಾಲೀಕತ್ವದಲ್ಲಿದ್ದ ದೆಹಲಿಯ 4 ಫ್ಲಾಟ್ಗಳಲ್ಲಿ 8.59 ಕೋಟಿ ನಗದು ಪತ್ತೆಯಾಗಿತ್ತು. ಇದೇ ವೇಳೆ ಕೋಟ್ಯಾಂತರ ರೂಪಾಯಿ ಹವಾಲಾ ವ್ಯವಹಾರ ಹಾಗೂ ತನ್ನ ಆಪ್ತರ ಮೂಲಕ ಕಾಂಗ್ರೆಸ್ ಹೈಕಮಾಂಡ್ಗೆ ಕೋಟ್ಯಾಂತರ ರೂಪಾಯಿ ಕಪ್ಪ ನೀಡಿರುವ ಸಂಬಂಧ ಡಿಕೆಶಿ ಹಾಗೂ ಆಪ್ತರ ವಿರುದ್ಧ ಐಟಿ ಕಾಯಿದೆ ಸೆಕ್ಷನ್ 277 ಹಾಗೂ278 ಹಾಗೂ ಐಪಿಸಿ 193, 199, 120(ಬಿ) ಅಡಿ ದೂರು ದಾಖಲಾಗಿತ್ತು.