ಎಸಿಬಿ ಕೈ ಕಟ್ಟಿಹಾಕಿದ ಸರ್ಕಾರ..! BBMP ಟಿಡಿಆರ್ ಆರೋಪಿಗಳ ರಕ್ಷಣೆ ಮಾಡ್ತಿವೆಯಾ ಸಕ್ಷಮ ಪ್ರಾಧಿಕಾರಗಳು.!?
ಬೆಂಗಳೂರು: ರಸ್ತೆ ಅಗಲೀಕರಣದ ವೇಳೆ ಮನೆ, ನಿವೇಶನ ಕಳೆದುಕೊಂಡವರಿಗೆ ಅಭಿವೃದ್ಧಿ ಹೆಸರಿನಲ್ಲಿ ಕೊಡುವ ಜಾಗದ ವಿಚಾರವಾಗಿ ಅಧಿಕಾರಿಗಳು ನಡೆಸಿರುವ ಬಹುದೊಡ್ಡ ಟಿಡಿಆರ್ ಹಗರಣ ನೂರಾರು ಕೋಟಿಯದ್ದು. ಈ ಸಂಬಂಧ ದಾಳಿ ನಡೆಸಿದ್ದ ಎಸಿಬಿ, ಶೇಕಡಾ 50% ರಷ್ಟು ತನಿಖೆ ಮುಕ್ತಾಯಗೊಳಿಸಿದೆ. ಪ್ರಕರಣದಲ್ಲಿ ಸಂಬಂಧ ಎಸಿಬಿ, ಭ್ರಷ್ಟಾಚಾರ ಆರೋಪದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳನ್ನು ಪಟ್ಟಿಮಾಡಿದೆ. ಆ ಪಟ್ಟಿ ನ್ಯೂಸ್ಫಸ್ಟ್ಗೆ ಲಭ್ಯವಾಗಿದೆ. ಆದರೆ ಆ ಅಧಿಕಾರಿಗಳ ವಿಚಾರಣೆ ಮಾಡಲು ಆಯಾ ಸಕ್ಷಮ ಪ್ರಾಧಿಕಾರದ ಅನುಮತಿಗಾಗಿ ಎಸಿಬಿ ಕಾಯುತ್ತಿದೆ.
ಎಸಿಬಿ ತನಿಖಾ ಪಟ್ಟಿಯಲ್ಲಿ ಆರೋಪವಿರುವ ಅಧಿಕಾರಿಗಳು
1. ಎಸ್.ಎಸ್ ಟೋಪಗಿ. ನಿವೃತ್ತ ಜಂಟಿ ನಿರ್ದೇಶಕರು, ನಗರ ಯೋಜನೆ
ಸಕ್ಷಮ ಪ್ರಾಧಿಕಾರ: ಸರ್ಕಾರ ಅಧಿನ ಕಾರ್ಯದರ್ಶಿ, ನಗರಾಭಿವೃಧಿ ಇಲಾಖೆ
2. ರಾಮೇಗೌಡ. ಬಿಬಿಎಂಪಿ, ನಿವೃತ್ತ ಪ್ರಭಾರ ಪ್ರಧಾನ ಅಭಿಯಂತಕರು
ಸಕ್ಷಮ ಪ್ರಾಧಿಕಾರ : ಪ್ರಧಾನ ಕಾರ್ಯದರ್ಶಿ ಲೋಕೋಪಯೋಗಿ ಇಲಾಖೆ
3. ವೆಂಕಟೇಶಪ್ಪ. ಕೆ.ಎಸ್ ಎ.ಎಸ್, ನಿವೃತ್ತ ಮುಖ್ಯ ಲೆಕ್ಕಾಧಿಕಾರಿ
ಸಕ್ಷಮ ಪ್ರಾಧಿಕಾರ : ಪ್ರಧಾನ ನಿರ್ದೇಶಕರು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ
4.ಎಂ.ಎಂ.ರಂಗನಾಥ್, ನಿವೃತ್ತ ಮುಖ್ಯ ಅಭಿಯಂತರರು
ಸಕ್ಷಮ ಪ್ರಾಧಿಕಾರ : ವ್ಯವಸ್ಥಾಪಕ ನಿರ್ದೇಶಕರು, ಕೆ.ಪಿ.ಸಿ.ಎಲ್
5. ಚನ್ನಯ್ಯ. ನಿವೃತ್ತ ಕಾರ್ಯಪಾಲಕ ಅಭಿಯಂತಕರು, ರಸ್ತೆ ನಿವೃತ್ತಿ ಆಗಲೀಕರಣ
ಸಕ್ಷಮ ಪ್ರಾಧಿಕಾರ : ಸರ್ಕಾರದ ಅಧೀನ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ
7.ರಮೇಶ್ ಕೆ.ಎನ್. ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರರು, ರಸ್ತೆ ಮೂಲಭೂತ ಸೌಕರ್ಯ ಮಹದೇವಪುರ ಬಿಬಿಎಂಪಿ
ಸಕ್ಷಮ ಪ್ರಾಧಿಕಾರ : ಸರ್ಕಾರದ ಪ್ರಧಾನ ಕಾರ್ಯದರ್ಶಿ ಲೊಕೋಪಯೋಗಿ ಇಲಾಖೆ
8. ಈಶ್ವರ ಪ್ರಸನ್ನಯ್ಯ, ಸಹಾಯಕ ಕಂದಾಯ ಅಧಿಕಾರಿ ಹೊರಮಾವು ಉಪವಲಯ ಬಿಬಿಎಂಪಿ ಬೆಂಗಳೂರು
(ಸದ್ಯ ಕಂದಾಯ ಅಧಿಕಾರಿ ಪದ್ಮನಾಭನಗರ ಬಿಬಿಎಂಪಿ)
ಸಕ್ಷಮ ಪ್ರಾಧಿಕಾರ : ಆಯುಕ್ತರು ಬಿ.ಬಿಎಂಪಿ ಬೆಂಗಳೂರು ನಗರ
9.ಎಂ.ಎನ್. ದೇವರಾಜು. ಸಹಾಯಕ ಆಭಿಯಂತರರು, ಟಿ.ಡಿ.ಆರ್ ವಿಭಾಗ ಮಹದೇವಪುರ ವಲಯ ಬಿಬಿಎಂಪಿ.
(ಸದ್ಯ ಸಹಾಯಕ ನಿರ್ದೇಶಕರು, ಬಿಬಿಎಂಪಿ ನಗರ ಯೋಜನೆ)
ಸಕ್ಷಮ ಪ್ರಾಧಿಕಾರ : ಸರ್ಕಾರದ ಪ್ರಧಾನ ಕಾರ್ಯದರ್ಶಿ ಲೋಕೋಪಯೋಗಿ ಇಲಾಖೆ
ನಿವೃತ್ತಿಗೂ ಮೊದಲು ಮಾಡಿದ್ದಾರೆ ದೊಡ್ಡ ಲೂಟಿ..?
ಇನ್ನೂ ನ್ಯೂಸ್ಫಸ್ಟ್ಗೆ ಸಿಕ್ಕಿರುವ ಮಾಹಿತಿಯಂತೆ, ಇಲ್ಲಿ ತನಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದ 6 ಮಂದಿ ನಿವೃತ್ತ ಅಧಿಕಾರಿಗಳು ಹಾಗೂ ಕಾರ್ಯನಿರ್ವಹಿಸುತ್ತಿರುವ 3 ಅಧಿಕಾರಿಗಳ ಪಾಲು ದೊಡ್ಡ ಮಟ್ಟದಲ್ಲಿದೆ ಅನ್ನೋದು ಪತ್ತೆಯಾಗಿದೆ. ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ, ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಗಳ ಅಧಿಕಾರಿಗಳ ಪಾತ್ರ ಇರೋದು ಪತ್ತೆಯಾಗಿದೆ. ಅವುಗಳಲ್ಲಿ ನಿವೃತ್ತಿಗೂ ಮುನ್ನ ದೊಡ್ಡ ಹುದ್ದೆಯಲ್ಲಿದ್ದ ಅಧಿಕಾರಿಗಳು ಸಿಂಹಪಾಲು ಲೂಟಿ ಮಾಡಿದ್ದಾರೆ ಅಂತಾ ಎಸಿಬಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಈ ಮೇಲಿನ ಎಲ್ಲಾ ಅಧಿಕಾರಿಗಳ ಮೇಲೆ ಎಸಿಬಿ ಎಫ್ಐಆರ್ ದಾಖಲಿಸಲು ಸಾಧ್ಯವಾಗಿಲ್ಲ. ಸಿಆರ್ಪಿಸಿ 17ರ ಪ್ರಕಾರ, ಎಸಿಬಿ ಆಯಾ ಸಕ್ಷಮ ಪ್ರಾಧಿಕಾರದ ಪರವಾನಗಿ ಪಡೆದೇ ಎಫ್ಐಆರ್ ದಾಖಲಿಸಬೇಕಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥರು, ತಮ್ಮ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿದ ಆರೋಪ ಹೊತ್ತ ನಿವೃತ್ತಿ ಹೊಂದಿದ ಹಾಗೂ ಕಾರ್ಯನಿರ್ವಹಿಸುತ್ತಿರುವವರ ರಕ್ಷಣೆಗೆ ನಿಂತಿದ್ದಾರೆ ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ. ಎಸಿಬಿ ಅನುಮತಿ ಕೋರಿ ತಿಂಗಳುಗಳು ಕಳೆದ್ರೂ ಆಯಾ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಗೆ ಪರವಾನಗಿ ಪತ್ರಕ್ಕೆ ಸಹಿ ಹಾಕಲು ಟೈಂ ಇಲ್ಲಾ ಅಂತಾ ಕಾಲ ತಳ್ಳುತ್ತಿರುವ ಆರೋಪಗಳಿವೆ. ಎಸಿಬಿ ಇಲ್ಲಿತನಕ ಮೂರು ಬಾರಿ ಅನುಮತಿಗೆ ಪತ್ರ ಕಳಿಸಿದ್ರೂ, ಪತ್ರ ಸ್ವೀಕಾರವಾಗದೇ ವಾಪಸ್ಸು ಬರುತ್ತಿದೆ. ಇತ್ತ ಎಸಿಬಿ ಪ್ರಮಾಣಿಕವಾಗಿ ಕೆಲಸ ಮಾಡಿದ್ರೂ, ಭ್ರಷ್ಟ ಅಧಿಕಾರಿಗಳನ್ನ ಬಚಾವ್ ಮಾಡುತ್ತಿರುವ ಸರ್ಕಾರದ ಈ ಕ್ರಮ ಎಸಿಬಿಯ ಮೇಲೆ ಜನ್ರು ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ.
ಇಬ್ಬರ ವಿಚಾರಣೆಗೆ ಮಾತ್ರ ಸಿಕ್ಕಿದೆ ಅನುಮತಿ
ಇನ್ನೂ ಈ ಹಗರಣ ಬೆಳಕಿಗೆ ಬಂದಾಗ ಮೊದಲು ಸಿಕ್ಕಿಬಿದ್ದಿದ್ದು ಬಿಡಿಎ ಇಂಜಿನಿಯರ್ ಕೃಷ್ಣಲಾಲ್ ಹಾಗೂ ರಸ್ತೆ ಮೂಲಭೂತ ಸೌಕರ್ಯ ಸಹಾಯಕರಾಗಿ ನಿವೃತ್ತಿಯಾಗಿದ್ದ ಕೆ.ಎನ್ ರಮೇಶ್. ಇವರ ವಿಚಾರಣೆಗೆ ಮಾತ್ರ ಪರ್ಮಿಷನ್ ಸಿಕ್ಕಿತ್ತು. ಯಾವಾಗ ಬೇರೆ ಬೇರೆ ಪ್ರಮುಖ ಅಧಿಕಾರಿಗಳ ಪಾತ್ರ ಪತ್ತೆಯಾಯ್ತೋ ಸರ್ಕಾರ ಅನುಮತಿ ನೀಡುತ್ತಿಲ್ಲ. ಕಾರಣ ಈ ಭ್ರಷ್ಟಾಚಾರ ಅರೋಪ ಹೊತ್ತಿರುವ ಅಧಿಕಾರಿಗಳ ಹಿಂದೆ ಸಿಎಂಗೆ ಅಪ್ತರಾದ ಕೆಲ ಸಚಿವರು ಇದ್ದರು, ಈಗಲೂ ಇದ್ದಾರೆ ಅನ್ನೋ ಶಂಕೆ ಇದೆ. ರಾಜ್ಯ ಸರ್ಕಾರದ ಈ ನಡೆ ಎಸಿಬಿ ಅಧಿಕಾರಿಗಳ ಕೈ ಕಟ್ಟಿಹಾಕಿ ತನಿಖೆಗೆ ಪರೋಕ್ಷವಾಗಿ ತಾತ್ಕಲಿಕ ತಡೆ ಆಗುವಂತೆ ಮಾಡಿದೆ.
ವಿಶೇಷ ಬರಹ: ವಿಷ್ಣು ಪ್ರಸಾದ್